About

ನಿನಾಸಮ್ನಲ್ಲಿ ನಾಟಕ ತರಬೇತಿ ಪಡೆದ ಕೆಲವರು ಮತ್ತು ನಿನಾಸಮ್-ನ ಪ್ರಾರಂಭದ ದಿನಗಳಿಂದಲೂ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಾ, ಬೆಂಗಳೂರಿನಲ್ಲಿಯೂ ರಂಗಭೂಮಿ, ಸಾಹಿತ್ಯ, ಸಿನಿಮಾ, ಶಿಲ್ಪಕಲೆ, ಫೋಟೋಗ್ರಫಿ, ಸಂಗೀತ -ಮುಂತಾದ ಹಲವಾರು ಕಲಾ ಪ್ರಾಕಾರಗಳ ಪ್ರಕ್ರಿಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ ಬಂದಿರುವ ಕಲಾಸಕ್ತ ವ್ಯಕ್ತಿಗಳು ಸೇರಿರುವ ಆಪ್ತ ಬಳಗವೇ "ಕೆ.ವಿ ಸುಬ್ಬಣ್ಣ ಆಪ್ತ ಸಮೂಹ".

ಸಾಹಿತ್ಯ, ರಂಗಭೂಮಿ, ಸಿನಿಮಾ, ಫೋಟೋಗ್ರಫಿ, ಶಿಲ್ಪಕಲೆ, ಸಂಗೀತ -ಹೀಗೆ ಬೇರೆ ಬೇರೆ ಕಲಾ ಪ್ರಾಕಾರಗಳ ವಿಶಿಷ್ಠತೆಯನ್ನು ಆಳವಾಗಿ ನೋಡುವುದು, ಗ್ರಹಿಸುವುದು, ಅನುಭವಿಸುವುದು, ಅಭ್ಯಸಿಸುವುದು, ಚರ್ಚಿಸುವುದು ಹಾಗೂ ಅನುಸಂಧಾನ ಮಾಡಿಕೊಳ್ಳುವ ಮೂಲಕ ಸದಭಿರುಚಿಯ ಸಹೃದಯ ಪ್ರೇಕ್ಷಕ-ಓದುಗ-ಕೇಳುಗರಾಗಿ ಉತ್ತಮ ವ್ಯಸನವನ್ನು ರೂಢಿಸುವ ಉದ್ದೇಶದಿಂದ ಆಪ್ತ ಸಮೂಹವು ಈವರೆಗೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬಂದಿದೆ.ಸದಭಿರುಚಿಯ ಸಹೃದಯ ಪ್ರೇಕ್ಷಕರನ್ನು ಬೆಳೆಸುವಲ್ಲಿ ಸಫಲವಾಗಿದೆ.

"ಕೆ.ವಿ ಸುಬ್ಬಣ್ಣ ಆಪ್ತ ಸಮೂಹ"ವು ತನ್ನ ಕಾರ್ಯ ಚಟುವಟಿಕೆಗಳನ್ನು ನಡೆಸಲು ಅಗತ್ಯವಿರುವ ಕೆ.ವಿ ಸುಬ್ಬಣ್ಣ ರಂಗಮಂದಿರವನ್ನು ಹೊಂದಲು ಶ್ರೀಮತಿ ಸರಸ್ವತಿ ಮತ್ತು ಶ್ರೀ ರಾಮಮೂರ್ತಿರವರ ತುಂಬು ಹೃದಯದ ಸಹಕಾರ ಕಾರಣವಾಗಿದೆ.ಅವರಿಗೆ ಆಪ್ತಸಮೂಹ ಯಾವಾಗಲೂ ಆಭಾರಿಯಾಗಿರುತ್ತದೆ.

"ಆಪ್ತ ಸಮೂಹ"ವು ಮುಖ್ಯವಾಗಿ ಶ್ರೀ ಗಿರೀಶ್ ಕಾಸರವಳ್ಳಿಯವರ ಮಾರ್ಗದರ್ಶನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಜೊತೆಗೆ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ಪರಿಣಿತರನ್ನು ಸಂಪರ್ಕಿಸಿ, ಅವರಿಂದಲೂ ಸಲಹೆ, ಸಹಕಾರಗಳನ್ನು ಪಡೆದುಕೊಳ್ಳುತ್ತಾ ತನ್ನ ಉದ್ದೇಶದತ್ತ ಮುಂದುವರೆಸುತ್ತಿದೆ. ಈ ಸಂದರ್ಭದಲ್ಲಿ ಅವರೆಲ್ಲರನ್ನೂ ಕೃತಜ್ಞತೆಯಿಂದ ನೆನೆಸಿಕೊಳ್ಳುತ್ತೇವೆ.

ನಮ್ಮ ಸಲಹಾ ಮಂಡಳಿಯು ಹೀಗಿದೆ:

  • ಶ್ರೀ ಯು.ಆರ್ ಅನಂತಮೂರ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
  • ಶ್ರೀ ಗಿರೀಶ್ ಕಾಸರವಳ್ಳಿ, ಪದ್ಮಶ್ರೀ ವಿಜೇತರು
  • ಶ್ರೀ ಎಸ್. ರಾಮಚಂದ್ರ, ಖ್ಯಾತ ಛಾಯಾಗ್ರಾಹಕರು
  • ಶ್ರೀ ಕೆ.ವಿ ಅಕ್ಷರ ಮತ್ತು ಹೆಗ್ಗೋಡು ಬಳಗ, ನೀನಾಸಂ ಹೆಗ್ಗೋಡು
  • ಶ್ರೀ ಬಿ.ಸುರೇಶ, ರಾಷ್ಟ್ರಪ್ರಶಸ್ತಿ ವಿಜೇತರು
  • ಶ್ರೀ ಪಿ.ಶೇಷಾದ್ರಿ, ರಾಷ್ಟ್ರಪ್ರಶಸ್ತಿ ವಿಜೇತರು
  • ಶ್ರೀ ಟಿ.ಪಿ ಅಶೋಕ್, ಅಧ್ಯಾಪಕರು
  • ಶ್ರೀ ಶ್ರೀನಿವಾಸ್ ವೈದ್ಯ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು
  • ಶ್ರೀ ಡಾ|| ವಸಂತ ಕುಲಕರ್ಣಿ, ವೃತ್ತಿಯಲ್ಲಿ ವೈದ್ಯರು

ಅಲ್ಲದೇ ಇನ್ನೂ ಹಲವಾರು ಮಹನೀಯರುಗಳು ಈ ಸಾಲಿನಲ್ಲಿ ಸೇರ್ಪಡೆಯಾಗುತ್ತಾರೆ.